ಚೆನ್ನಕೇಶವ ದೇವಾಲಯ, ಬೇಲೂರು
ಚನ್ನಕೇಶವ ದೇವಸ್ಥಾನ, ಬೇಲೂರು
ಹಾಸನದಿಂದ 38 ಕಿ.ಮೀ.ದೂರದಲ್ಲಿ ಯಗಚಿ ನದಿಯ ದಂಡೆಯ ಮೇಲಿರುವ ಬೇಲೂರು ಜಗತ್ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಬೇಲೂರು ಹಿಂದೆ ಹೊಯ್ಸಳರ ರಾಜಧಾನಿಯಾಗಿದ್ದಿತು. ಇತಿಹಾಸದ ಬೇರೆ ಬೇರೆ ಕಾಲದಲ್ಲಿ ವೇಲಾಪುರ, ವೇಲೂರು ಮತ್ತು ಬೇಲಾಪುರವೆಂಬ ಹೆಸರುಗಳಿಂದ ಕರೆಯಲ್ಪಡುತ್ತಿತ್ತು. ಹೊಯ್ಸಳ ಶಿಲ್ಪಕಲೆಯ ಅತ್ಯಂತ ಸುಂದರ ಉದಾಹರಣೆಗಳಲ್ಲೊಂದಾದ ಚೆನ್ನಕೇಶವ ದೇವಸ್ಥಾನದಿಂದಾಗಿ ಈ ಪಟ್ಟಣವು ಪ್ರಸಿದ್ಧವಾಗಿದೆ. ಕ್ರಿ.ಶ.1116ರಲ್ಲಿ ಹೊಯ್ಸಳ ರಾಜ ವಿಷ್ಣುವರ್ಧನನು ಚೋಳರ ವಿರುದ್ಧ ಸಾಧಿಸಿದ ವಿಜಯದ ದ್ಯೋತಕವಾಗಿ ಈ ದೇಗುಲವನ್ನು ನಿರ್ಮಿಸಿ, ವಿಜಯ ನಾರಾಯಣ ಎಂದು ಕರೆದನು.
ದೇವಸ್ಥಾನದ ವಾಸ್ತು ಶಿಲ್ಪ
ಅತ್ಯಂತ ಸೂಕ್ಷ್ಮವಾದ ಕೆತ್ತನೆಗಳಿಗಾಗಿ ಕಟ್ಟಡಗಳಿಗೆ ಹೊಯ್ಸಳರು ಮೃದು ಬಳಪದ ಕಲ್ಲನ್ನು ಬಳಸಿದ್ದರು. ದೇವಸ್ಥಾನವು ವಿಜಯನಗರ ಶೈಲಿಯಲ್ಲಿ ಗೋಪುರದಿಂದ ಕೂಡಿದ ಒಂದು ದೊಡ್ಡ ಪ್ರಾಕಾರದಿಂದ ಸುತ್ತುವರೆದಿದ್ದು, ದೇವಸ್ಥಾನವು ಒಂದು ಜಗುಲಿಯ ಮೇಲೆ ನಿಂತಿದ್ದು, ಒಂದು ದೊಡ್ಡ ಕರಂಡಕದಂತೆ ಕಾಣುತ್ತದೆ. ಈ ಮೇರುಕೃತಿಯಲ್ಲಿ ಶಿಲ್ಪಕಲಾವಿದನ ನೈಪುಣ್ಯ ಮತ್ತು ಕೈಚಳಕ ನಿಜವಾಗಿಯೂ ಆಶ್ಚರ್ಯಕರವಾಗಿದೆ.
ಶಿಲ್ಪಕಲೆಯ ಅಸಾಮಾನ್ಯತೆ
ಚೆನ್ನಕೇಶವ ದೇವಸ್ಥಾನವು ಕಲ್ಲಿನಲ್ಲಿ ಮಾಡಬಹುದಾದ ಅತ್ಯಂತ ಸೂಕ್ಷ್ಮ ಕೆತ್ತನೆಗಳಿಗೆ ಕಲಾ ನೈಪುಣ್ಯತೆಗೆ ಉತ್ತಮ ಉದಾಹರಣೆಯಾಗಿದೆ. ಈ ದೇವಸ್ಥಾನದಲ್ಲಿ 80ಕ್ಕೂ ಹೆಚ್ಚು ಮದನಿಕೆಯರ ಶಿಲ್ಪಗಳು, ನಾಟ್ಯ, ಬೇಟೆ, ಮರಗಳ ಕೆಳಗೆ ನಿಂತಿರುವುದು, ಇತ್ಯಾದಿಗಳು ಇವೆ. ಕೆತ್ತನೆಯಿಂದ ಕೂಡಿರುವ ನವರಂಗದ ಕಂಬಗಳ ಮೇಲೆ ಕೆತ್ತಲಾಗಿರುವ 4 ಮದನಿಕಾ ವಿಗ್ರಹಗಳು (ಆಕರ್ಷಕವಾದ ಸೊಗಸಾದ ನಾಟ್ಯ ಭಂಗಿಗಳು) ಹೊಯ್ಸಳ ಶೈಲಿಯ ಅನುಪಮ ನಿರ್ಮಿತಿಗಳು. ಗರ್ಭಗೃಹವು ನಕ್ಷತ್ರಾಕಾರವಾಗಿದ್ದು, ಹಗಲಿನ ಬೇರೆ ಬೇರೆ ಹೊತ್ತಿನ ಗರ್ಭಗೃಹದ ಅಂಕುಡೊಂಕಾದ ಗೋಡೆಗಳ ಮೇಲೆ ಬಿದ್ದ ಬೆಳಕು ವಿಷ್ಣುವಿನ 24 ರೂಪಗಳನ್ನು ಬೇರೆ ಬೇರೆಯಾಗಿ ಕಾಣುವಂತೆ ಮಾಡುತ್ತದೆ. ಕಲ್ಯಾಣ ಚಾಲುಕ್ಯರ ಕಲಾಕೇಂದ್ರವಾದ ಶಿವಮೊಗ್ಗ ಜಿಲ್ಲೆಯ ಬಳ್ಳಿಗಾವಿಯಿಂದ ಬಂದ ತಂದೆ ಮತ್ತು ಮಗನಾದ ದಾಸೋಜ ಮತ್ತು ಚವನ ಎಂಬ ಕುಶಲಕಲಾಕಾರರಿಂದ ಈ ದೇವಸ್ಥಾನವು ಕಟ್ಟಲ್ಪಟ್ಟಿದೆ. ನವರಂಗದಲ್ಲಿರುವ ಶಿಲ್ಪಗಳ ಪೈಕಿ ದರ್ಪಣಸುಂದರಿ ಶಿಲ್ಪಕ್ಕೆ, ರಾಜ ವಿಷ್ಣುವರ್ಧನನ ಪತ್ನಿಯಾದ ಪರಮಸುಂದರಿ ಶಾಂತಲಾದೇವಿಯು ರೂಪದರ್ಶಿಯಾಗಿದ್ದಳು ಎನ್ನಲಾಗುತ್ತದೆ. ಈ ಒಂದೇ ಕೆತ್ತನೆಯು ದೇವಸ್ಥಾನದ ಸೌಂದರ್ಯವನ್ನು ಹಾಗೂ ಭವ್ಯತೆಯನ್ನು ಎತ್ತಿ ತೋರಿಸುತ್ತದೆ. ಕಪ್ಪೆ ಚೆನ್ನಿಗರಾಯ, ಸೌಮ್ಯನಾಯಕಿ, ಆಂಡಾಳ್ ಮತ್ತು ಇನ್ನಿತರೆ ವೈಷ್ಣವ ಅಭಿವ್ಯಕ್ತಿಗಳು ಈ ದೇವಸ್ಥಾನವನ್ನು ಸುತ್ತುವರಿದಿವೆ. 13ನೇ ಶತಮಾನದ ಪ್ರಸಿದ್ಧ ಕನ್ನಡ ಕವಿ ರಾಘವಾಂಕನದು ಎಂದು ಹೇಳಲಾದ ಒಂದು ಸಮಾಧಿಯು ಬೇಲೂರಿನಲ್ಲಿ ಇದೆ.
ಫೋಟೋ ಗ್ಯಾಲರಿ
ತಲುಪುವ ಬಗೆ:
ವಿಮಾನದಲ್ಲಿ
ಹಾಸನದಲ್ಲಿ ವಿಮಾನ ನಿಲ್ದಾಣವಿರುವುದಿಲ್ಲ. ಬೆಂಗಳೂರು ಅತಿ ಹತ್ತಿರದ ವಿಮಾನ ನಿಲ್ದಾಣವಾಗಿದ್ದು, ಅಲ್ಲಿಂದ ಭಾರತದಾದ್ಯಂತ ದೊಡ್ಡ ದೊಡ್ಡ ಸ್ಥಳಗಳಿಗೆ ಹಾಗೂ ವಿದೇಶಗಳಿಗೆ ಹೋಗಲು ವಿಮಾನಗಳು ಇರುತ್ತವೆ
ರೈಲಿನಿಂದ
ಹಾಸನವು ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ ಮತ್ತು ಮಂಗಳೂರಿಗೆ ರೈಲು ಸಂಪರ್ಕ ಹೊಂದಿದೆ.
ರಸ್ತೆ ಮೂಲಕ
ಹಾಸನದಿಂದ ಸುಮಾರು 38 ಕಿ.ಮೀ.ದೂರದಲ್ಲಿದೆ. ಬಸ್ ಸೇವೆಗಳು ಮತ್ತು ಟ್ಯಾಕ್ಸಿಗಳು ಹಾಸನದಿಂದ ಲಭ್ಯವಿರುತ್ತವೆ.