ಶ್ರವಣಬೆಳಗೊಳ
ಕರ್ನಾಟಕ ರಾಜ್ಯದ ರಾಜಧಾನಿಯಾದ ಬೆಂಗಳೂರಿನಿಂದ ಸುಮಾರು 150 ಕಿ.ಮೀ ದೂರದಲ್ಲಿ ಪಶ್ಚಿಮೋತ್ತರಕ್ಕೆ ಶ್ರವಣಬೆಳಗೊಳವಿದೆ. ಈ ಪಟ್ಟಣವು ಸುಮಾರು 2 ಸಹಸ್ರ ವರ್ಷಗಳಿಗೂ ಮೇಲ್ಪಟ್ಟು ಜೈನರ ಕಲೆ, ವಾಸ್ತುಶಿಲ್ಪ, ಧರ್ಮ, ಮತ್ತು ಸಂಸ್ಕೃತಿ ಇವುಗಳ ಪ್ರಮುಖ ಕೇಂದ್ರವಾಗಿದೆ. ಸುಮಾರು 2 ಸಹಸ್ರ ವರ್ಷಗಳ ಹಿಂದೆ ಜೈನರ ಮಹಾನ್ ಆಚಾರ್ಯರುಗಳಲ್ಲಿ ಅತ್ಯಂತ ಪೂರ್ವಿಕರಾದ ಭಗವಾನ್ ಭದ್ರಬಾಹು ಮುನಿಗಳು ಮಧ್ಯಪ್ರದೇಶದ ಉಜ್ಜಯಿನಿಯಿಂದ ಶ್ರವಣಬೆಳಗೊಳಕ್ಕೆ ತಮ್ಮ ಶಿಷ್ಯರೊಂದಿಗೆ ಬಂದರು. ಈ ತಪಸ್ವಿಯಿಂದ ಪ್ರಭಾವಿತನಾದ ಭಾರತದ ಬಹುಭಾಗಗಳನ್ನು ಆಳಿದ ಚಕ್ರವರ್ತಿ ಚಂದ್ರಗುಪ್ತ ಮೌರ್ಯನು ತನ್ನ ಮಗನಿಗೆ ರಾಜ್ಯಭಾರವನ್ನು ವಹಿಸಿಕೊಟ್ಟು ಈ ಭಾಗದಲ್ಲಿ ನೆಲೆಸಿದನು.
ಗೊಮ್ಮಟೇಶ್ವರಸ್ವಾಮಿಯ ಏಕಶಿಲಾವಿಗ್ರಹ :
ಎರಡು ಬೆಟ್ಟಗಳಲ್ಲೊಂದಾದ ಇಂದ್ರಗಿರಿಯ ಮೇಲೆ 18 ಮೀಟರ್ ಎತ್ತರದ ಜೈನ ತಪಸ್ವಿಯಾದ ಗೊಮ್ಮಟೇಶ್ವರಸ್ವಾಮಿಯ ಏಕಶಿಲಾವಿಗ್ರಹವು ಶತಮಾನಗಳಿಂದಲೂ ಪೂಜಾ ಮಾಧ್ಯಮವಾಗಿ ನಿಂತಿದೆ. ಮತ್ತು ಇದು ಪ್ರಪಂಚದಲ್ಲೇ ಇದು ಅತಿ ಎತ್ತರದ ಹಾಗೂ ಅತ್ಯಂತ ಸುಂದರವಾದ ಏಕಶಿಲಾವಿಗ್ರಹಗಳಲ್ಲೊಂದು ಎಂದು ಹೇಳಲಾಗುತ್ತದೆ.
ಏಕಶಿಲಾವಿಗ್ರಹದ ಇತಿಹಾಸ :
ಬಾಹುಬಲಿ ಎಂದೂ ಕರೆಯಲ್ಪಡುವ ಗೊಮ್ಮಟೇಶ್ವರಸ್ವಾಮಿಯು ಜೈನರ ಮೊದಲ ತೀರ್ಥಂಕರರಾದ ಆದಿನಾಥ ಸ್ವಾಮಿಯವರ ಮಗ. ಸಿಂಹಾಸನದ ವಾರಸುದಾರಿಕೆಯ ಕುರಿತು ತನ್ನ ಅಣ್ಣನಾದ ಭರತನಿಂದ ಕೆಣಕಲ್ಪಟ್ಟು, ಬಾಹುಬಲಿಯು ಭರತನನ್ನು ಮೂರು ಬಗೆಯ, – ದೃಷ್ಟಿಯುದ್ಧ, ಮಲ್ಲಯುದ್ಧ, ಮತ್ತು ಜಲಯುದ್ದ – ದ್ವಂದ್ವ ಯುದ್ಧಕ್ಕೆ ಕರೆಯುತ್ತಾನೆ. ಬಾಹುಬಲಿಯು ಕೊನೆಯಲ್ಲಿ ಯುದ್ಧಗಳಲ್ಲಿ ಗೆದ್ದರೂ, ಐಹಿಕ ಜಗತ್ತಿನ ಸಂಪತ್ತಿನ ಅಗಾಧತೆಯನ್ನೂ ವ್ಯರ್ಥತೆಯನ್ನೂ ಮನಗಂಡು ಅಣ್ಣತಮ್ಮಂದಿರೇ ಒಬ್ಬರ ವಿರುದ್ಧ ಇನ್ನೊಬ್ಬರು ತಿರುಗಿ ನಿಲ್ಲಬೇಕಾದದ್ದನ್ನು ಕಂಡು ವ್ಯಥಿತನಾದನು. ಆಗ ಅವನು ತನ್ನ ರಾಜ್ಯವನ್ನು ಹಾಗೂ ಲೌಕಿಕ ಸುಖಭೋಗಗಳನ್ನು ಪರಿತ್ಯಾಗ ಮಾಡಿದನು. ಬಾಹುಬಲಿಯು ದೀರ್ಘ ಧ್ಯಾನದಲ್ಲಿ ನಿಂತು ಆಧ್ಯಾತ್ಮಿಕ ಶಾಂತಿಯ ಬೆಳಕಿನಲ್ಲಿ ಹೊಳೆಯತೊಡಗಿದನು. ಗಂಗ ಸಾಮ್ರಾಜ್ಯದ ಪ್ರಧಾನಾಮಾತ್ಯನಾದ ಮತ್ತು ಮುಖ್ಯ ಸೇನಾನಿಯಾದ ಚಾವುಂಡರಾಯನು ಕ್ರಿ.ಶ.981ರಲ್ಲಿ ಧ್ಯಾನನಿರತನಾದ ಬಾಹುಬಲಿಯ ಮೂರ್ತಿಯನ್ನು ನಿರ್ಮಿಸಿದನು.
ಇಂದ್ರಗಿರಿಯ ಎದುರಿಗೇ ಸ್ವಲ್ಪ ಚಿಕ್ಕದಾದ ಚಂದ್ರಗಿರಿ ಬೆಟ್ಟವು ಇದ್ದು, ಅಲ್ಲಿ ಕೆಲವು ಜೈನ ದೇವಸ್ಥಾನಗಳು ಮತ್ತು ಜೈನ ಧರ್ಮದ ಪ್ರಸಿದ್ಧ ಪೋಷಕನಾದ ಚಂದ್ರಗುಪ್ತ ಮೌರ್ಯನ ಸಮಾಧಿ ಇವುಗಳನ್ನು ಕಾಣಬಹುದು.
ಮಹಾಮಸ್ತಕಾಭಿಷೇಕ :
ಮಹಾಮಸ್ತಕಾಭಿಷೇಕ ಉತ್ಸವವು, ಹನ್ನೆರಡು ವರ್ಷಗಳಿಗೊಮ್ಮೆ ಜರುಗುವ ಒಂದು ಸುದೀರ್ಘವಾದ ಆಚರಣೆಯಾಗಿದೆ. 2006ರಲ್ಲಿ ಜಗತ್ತಿನ ಎಲ್ಲ ಕಡೆಗಳಿಂದಲೂ ಭಕ್ತಾದಿಗಳನ್ನು ಆಕರ್ಷಿಸಿತ್ತು. ನೂರಾರು ಕೊಡಗಳಲ್ಲಿ ಎಳನೀರು, ಅರಿಶಿನದ ಮುದ್ದೆ, ಕುಂಕುಮ, ಕಬ್ಬಿನ ಹಾಲು, ಹಾಲು, ಅಕ್ಕಿಹಿಟ್ಟು, ಮೂಲಿಕೆಗಳಿಂದ ಮಾಡಿದ ಕಷಾಯ, ಶ್ರೀಗಂಧ, ಚಂದನ, ಅಷ್ಟಗಂಧ, ಕೇಸರಿ, ಬಂಗಾರ ಮತ್ತು ಬೆಳ್ಳಿಯ ಹೂವುಗಳು ಮತ್ತು ಬೆಲೆಬಾಳುವ ಹರಳುಗಳನ್ನು ಮೂರ್ತಿಯ ಮೇಲಿನಿಂದ ಅಭಿಷೇಕ ಮಾಡಲು ಅರ್ಚಕರುಗಳು ಮೇಲೆ ಹತ್ತುತ್ತಾರೆ. ಹೆಲಿಕಾಪ್ಟರ್ ನಿಂದ ಹೂಮಳೆಗರೆಯುವುದು ಈ ಕಾರ್ಯಕ್ರಮದ ಅದ್ಭುತವಾದ ಅಂತಿಮ ಚರಣ.
ಫೋಟೋ ಗ್ಯಾಲರಿ
ತಲುಪುವ ಬಗೆ:
ವಿಮಾನದಲ್ಲಿ
ಹಾಸನದಲ್ಲಿ ವಿಮಾನ ನಿಲ್ದಾಣವಿರುವುದಿಲ್ಲ. ಬೆಂಗಳೂರು ಅತಿ ಹತ್ತಿರದ ವಿಮಾನ ನಿಲ್ದಾಣವಾಗಿದ್ದು, ಅಲ್ಲಿಂದ ಭಾರತದಾದ್ಯಂತ ದೊಡ್ಡ ದೊಡ್ಡ ಸ್ಥಳಗಳಿಗೆ ಹಾಗೂ ವಿದೇಶಗಳಿಗೆ ಹೋಗಲು ವಿಮಾನಗಳು ಇರುತ್ತವೆ
ರೈಲಿನಿಂದ
ಹಾಸನವು ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ ಮತ್ತು ಮಂಗಳೂರಿಗೆ ರೈಲು ಸಂಪರ್ಕ ಹೊಂದಿದೆ.
ರಸ್ತೆ ಮೂಲಕ
ಹಾಸನವು ಬೆಂಗಳೂರು, ಮೈಸೂರು, ಮಂಗಳೂರು, ಮಡಿಕೇರಿ, ಚಿಕ್ಕಮಗಳೂರು ಇವುಗಳಿಗೆ ಒಳ್ಳೆಯ ಸಂಪರ್ಕ ಹೊಂದಿದೆ. ಇದು ಬೆಂಗಳೂರಿನಿಂದ ಸುಮಾರು 187 ಕಿಲೋಮೀಟರ್ ಮತ್ತು ಮೈಸೂರಿನಿಂದ 115 ಕಿಲೋಮೀಟರ್ ದೂರದಲ್ಲಿದೆ. ಈ ನಗರಗಳಿಗೆ/ಪಟ್ಟಣಗಳಿಗೆ ಹಾಸನದಿಂದ ಮೇಲಿಂದ ಮೇಲೆ ಬಹಳಷ್ಟು ಸರ್ಕಾರಿ ಬಸ್ಸುಗಳು ಇರುತ್ತವೆ.