ಮುಚ್ಚಿ

ಜಿಲ್ಲೆಯ ಬಗ್ಗೆ

ಜಿಲ್ಲೆಯ ಕುರಿತು :

ಹಾಸನ ಜಿಲ್ಲೆಯು ಭಾರತದಲ್ಲಿ ಕರ್ನಾಟಕ ರಾಜ್ಯದ 30 ಜಿಲ್ಲೆಗಳ ಪೈಕಿ ಕರ್ನಾಟಕದ ನೈರುತ್ಯ ದಿಕ್ಕಿನಲ್ಲಿರುವ ಒಂದು ಜಿಲ್ಲೆ.  ಜಿಲ್ಲೆಯು ಶ್ರೀಮಂತ ಇತಿಹಾಸದಿಂದ ಹಾಗೂ ಸ್ಮರಣೀಯ ಘಟನೆಗಳಿಂದ ಕೂಡಿದೆ.  ಬೇಲೂರು ತಾಲ್ಲೂಕಿನ ಈಗಿನ ಹಳೇಬೀಡಾಗಿರುವ ಹಿಂದಿನ ದ್ವಾರಸಮುದ್ರವನ್ನು ರಾಜಧಾನಿಯಾಗಿ ಮಾಡಿಕೊಂಡಿದ್ದ ಹೊಯ್ಸಳ ಚಕ್ರವರ್ತಿಗಳ ಅಧಿಕಾರಾವಧಿಯಲ್ಲಿ ಈ ಜಿಲ್ಲೆಯು ತನ್ನ ವೈಭವದ  ಉತ್ತುಂಗವನ್ನು ತಲುಪಿತ್ತು.  ಕಣ್ಮನ ಸೆಳೆಯುವ ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾದ ಈ ಜಿಲ್ಲೆಯು ಬೇಲೂರು ಮತ್ತು ಹಳೇಬೀಡಿನಲ್ಲಿರುವಂತಹ ಹೊಯ್ಸಳ ಶೈಲಿಯ ವಾಸ್ತು ಹಾಗೂ ಶಿಲ್ಪಕಲೆಯ ತವರಾಗಿದೆ. ಜೈನಸ್ಮಾರಕಗಳಿಂದ ಕೂಡಿರುವ ಚನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳವು ಜೈನರ ಸುಪ್ರಸಿದ್ಧ ಯಾತ್ರಾಸ್ಥಳವಾಗಿದೆ.

ಹೆಸರಿನ ಮೂಲ :

ರಾಜ್ಯದ ಬಹಳಷ್ಟು ಜಿಲ್ಲೆಗಳಂತೆಯೇ ಈ ಜಿಲ್ಲೆಯೂ ತನ್ನ ಕೇಂದ್ರ ಕಾರ್ಯಸ್ಥಾನದ ಪಟ್ಟಣ “ಹಾಸನ” ಹೆಸರಿನಿಂದಲೇ ಕರೆಯಲ್ಪಡುತ್ತಿದೆ.  ಸ್ಥಳಪುರಾಣದ ಪ್ರಕಾರ “ಹಾಸನ”ವು ”ಸಿಂಹಾಸನಪುರ”ದ ಸಂಕ್ಷಿಪ್ತನಾಮ.  ಪಾಂಡವರ ಪೈಕಿ ಅರ್ಜುನನ ಮರಿಮೊಮ್ಮಗನಾದ ಜನಮೇಜಯನ ಹೆಸರಿನೊಂದಿಗೆ ತಳುಕು ಹಾಕಿಕೊಂಡಿದೆ.  ಆದರೆ ಬಹಳ ಜನಗಳ ನಂಬಿಕೆಯ ಪ್ರಕಾರ ಇಲ್ಲಿಯ ಅಧಿದೇವತೆಯಾದ ಹಾಸನಮ್ಮ ಅಥವಾ ಹಾಸನಾಂಬೆ ಅಂದರೆ ಕನ್ನಡದಲ್ಲಿ ‘ನಗೆಮೊಗದ’ (ಹಸನ್ಮುಖಿ) ತಾಯಿ ಅಥವಾ ದೇವತೆಯಿಂದ “ಹಾಸನ” ಎಂಬ ಹೆಸರು ಬಂದಿದೆ.  ಈ ಸಂದರ್ಭದಲ್ಲಿ ದೇವತೆ ಹಾಸನಾಂಬೆಯು ಈ ಸ್ಥಳಕ್ಕೆ ಹೇಗೆ ಬಂದಳೆನ್ನುವುದಕ್ಕೆ ಒಂದು ಸಾಂಪ್ರದಾಯಿಕ ಕಥೆ ಇಂತಿದೆ – ಒಮ್ಮೆ ಸಪ್ತ ಮಾತೃಕೆಯರು ವಾರಣಾಸಿ (ಕಾಶಿ) ಯಿಂದ ದಕ್ಷಿಣ ದಿಕ್ಕಿಗೆ ಪ್ರಯಾಣಿಸುತ್ತಿರುವಾಗ, ಈ ಪ್ರದೇಶದ ರಮಣೀಯತೆಗೆ ಮಾರುಹೋಗಿ ಇಲ್ಲೇ ನೆಲೆಸುವ ನಿರ್ಧಾರ ಮಾಡಿದರು.  ಆ ಪ್ರಕಾರ, ಸಹೋದರಿಯರಾದ ಸಪ್ತಮಾತೃಕೆಯರಲ್ಲಿ ಮೂವರು ಹಾಸನದಲ್ಲಿ ನೆಲೆಸಿದರು.  ಇನ್ನು ಮೂವರು ಹಾಸನ ನಗರದಲ್ಲೇ ಇರುವ ದೇವಿಗೆರೆ (ಕೆರೆ)ಯಲ್ಲಿ ನೆಲೆಸಿದರು.  ಅವರನ್ನು ಹಾಸನಾಂಬಾ ಎಂದು ಕರೆಯಲಾಗುತ್ತದೆ.  ಇನ್ನೊಬ್ಬರು ಕೆಂಚಾಂಬಾ ಎಂಬ ಹೆಸರಿನಿಂದ, ಆಲೂರು ತಾಲ್ಲೂಕಿನ ಕೆಂಚಮ್ಮನ ಹೊಸಕೋಟೆ ಎಂಬಲ್ಲಿ ಅರಣ್ಯದಲ್ಲಿ ನೆಲೆಸಿದರು.

ಹಾಸನ ಜಿಲ್ಲೆಯ ಭೌಗೋಳಿಕ ಮತ್ತು ಐತಿಹಾಸಿಕ ಪ್ರಾಮುಖ್ಯತೆ:

ಭೂಗೋಳ: – ಉತ್ತರ ಅಕ್ಷಾಂಶ 12⁰ 13’ ಮತ್ತು 13⁰ 33’ ನಡುವೆ ಹಾಗೂ ಪೂರ್ವ ರೇಖಾಂಶ 75⁰ 33’ ಮತ್ತು 76⁰ 38’ಗಳ ನಡುವೆ ಇರುವ ಹಾಸನ ಜಿಲ್ಲೆಯು ಒಟ್ಟು 6826.15 ಚದರ ಕಿಲೋಮೀಟರ್ ವಿಸ್ತೀರ್ಣವಿದೆ.  ಜಿಲ್ಲೆಯ ಅತ್ಯಧಿಕ ಉದ್ದ ದಕ್ಷಿಣದಿಂದ ಉತ್ತರಕ್ಕೆ 129 ಕಿ.ಮೀ ಹಾಗೂ ಅತ್ಯಧಿಕ ಅಗಲ ಪೂರ್ವದಿಂದ ಪಶ್ಚಿಮಕ್ಕೆ 116 ಕಿ.ಮೀ.ಗಳು.  ಜಿಲ್ಲೆಯು ಒಟ್ಟು 8 ತಾಲ್ಲೂಕುಗಳನ್ನು, 38 ಹೋಬಳಿಗಳನ್ನು ಹಾಗೂ 2369 ಗ್ರಾಮಗಳನ್ನು ಹೊಂದಿದೆ. ಹಾಸನ ಜಿಲ್ಲೆಯ ಭೌಗೋಳಿಕ ವಿಸ್ತೀರ್ಣ 6845 ಚದರ ಕಿ.ಮೀ.ಗಳು.  ಇಲ್ಲಿನ ಜನಸಂಖ್ಯೆ 15.67 ಲಕ್ಷ ಮತ್ತು ಸರಾಸರಿ ಮಳೆ ವಾರ್ಷಿಕ 1031 ಮಿ.ಮಿ.ಗಳು.  ಕಾಫಿ, ಕರಿಮೆಣಸು, ಆಲೂಗೆಡ್ಡೆ, ಭತ್ತ ಮತ್ತು ಕಬ್ಬು ಇಲ್ಲಿನ ಪ್ರಮುಖ ಬೆಳೆಗಳು.  ಹಾಸನ ಜಿಲ್ಲೆಯು ಭಾಗಶಃ ಮಲೆನಾಡು ಹಾಗೂ ಭಾಗಶಃ ಬಯಲುಸೀಮೆಯ ಭಾಗಗಳನ್ನು ಹೊಂದಿದೆ. ಭೌಗೋಳಿಕ ಅಂಶಗಳು, ವಾತಾವರಣ, ಮಳೆ, ಇತ್ಯಾದಿ ಅಂಶಗಳನ್ನು ಗಮನಿಸಿದಾಗ ಈ ಜಿಲ್ಲೆಯನ್ನು (1) ದಕ್ಷಿಣ ಮಲೆನಾಡು, (2) ಅರೆಮಲೆನಾಡು ಮತ್ತು (3) ದಕ್ಷಿಣ ಬಯಲು ಸೀಮೆ ಎಂದು ಮೂರು ಪ್ರದೇಶಗಳಾಗಿ ವಿಂಗಡಿಸಬಹುದು.  ಬೇಲೂರು ತಾಲ್ಲೂಕಿನ ಪಶ್ಚಿಮ ಮತ್ತು ಪೂರ್ವೋತ್ತರ ಭಾಗಗಳು, ಆಲೂರು ತಾಲ್ಲೂಕಿನ ಪಶ್ಚಿಮ ಮತ್ತು ಮಧ್ಯ ಪ್ರದೇಶಗಳು, ಮತ್ತು ಸಕಲೇಶಪುರ ತಾಲ್ಲೂಕಿನ ಸಂಪೂರ್ಣ ಭೂ ಪ್ರದೇಶ, ದಕ್ಷಿಣ ಮಲೆನಾಡು ಆಗುತ್ತದೆ.  ಅರಕಲಗೂಡು ತಾಲ್ಲೂಕಿನ ಮಧ್ಯಭಾಗಗಳು, ಹಾಸನ ತಾಲ್ಲೂಕಿನ ಪಶ್ಚಿಮ ಭಾಗ, ಆಲೂರು ತಾಲ್ಲೂಕಿನ ಪೂರ್ವ ಭಾಗ, ಬೇಲೂರು ತಾಲ್ಲೂಕಿನ ಮಧ್ಯ ಹಾಗೂ ಪೂರ್ವ ಭಾಗಗಳು ಮತ್ತು ಅರಸೀಕೆರೆ ತಾಲ್ಲೂಕಿನ ಪಶ್ಚಿಮ ಭಾಗಗಳು “ಅರೆಮಲೆನಾಡು” ಪ್ರದೇಶ ಆಗುತ್ತವೆ. ಹೊಳೆನರಸೀಪುರ ಮತ್ತು ಚನ್ನರಾಯಪಟ್ಟಣ ತಾಲ್ಲೂಕುಗಳನ್ನು ಸಂಪೂರ್ಣವಾಗಿ, ಅರಸೀಕೆರೆ ಮತ್ತು ಹಾಸನ ತಾಲ್ಲೂಕುಗಳ ಪೂರ್ವ ಭಾಗಗಳು ಮತ್ತು ಅರಕಲಗೂಡು ತಾಲ್ಲೂಕಿನ ಆಗ್ನೇಯ ಭಾಗಗಳು ದಕ್ಷಿಣದ ಬಯಲು ಪ್ರದೇಶವಾಗುತ್ತವೆ.  ದಕ್ಷಿಣದ ಮಲೆನಾಡು ಭಾಗವು ದಟ್ಟ ಅರಣ್ಯದಿಂದ ಬೆಟ್ಟಗುಡ್ಡಗಳಿಂದ ಕೂಡಿದ್ದು, ಭಾರೀ ಮಳೆಯ ಪ್ರದೇಶವಾಗಿದೆ.

ಜನಸಂಖ್ಯೆ ಮತ್ತು ಬೆಳವಣಿಗೆಯ ಪ್ರವೃತ್ತಿ :

  2001ರ ಜನಗಣತಿಯ ಪ್ರಕಾರ, ಹಾಸನ ಜಿಲ್ಲೆಯ ಜನಸಂಖ್ಯೆಯು 17,21,669 ಇತ್ತು.  ಅದರಲ್ಲಿ, 14,16,996 ಗ್ರಾಮೀಣ ಜನಸಂಖ್ಯೆಯಾಗಿದ್ದು, 3,04,673 ನಗರ ಜನಸಂಖ್ಯೆಯಾಗಿತ್ತು.  ಜಿಲ್ಲೆಯ ಗ್ರಾಮೀಣ ಹಾಗೂ ಪಟ್ಟಣದ ಜನಸಂಖ್ಯೆಯು ಕ್ರಮವಾಗಿ ಒಟ್ಟು ಜನಸಂಖ್ಯೆಯ ಶೇಕಡಾ 82.31% ಮತ್ತು 17.69% ಆಗಿತ್ತು.  1981ರ ಜನಗಣತಿಯ ಪ್ರಕಾರ (1,35,704) ಪಟ್ಟಣದ ಹಾಗೂ ಗ್ರಾಮೀಣ ಜನಸಂಖ್ಯೆಯು ಕ್ರಮವಾಗಿ ಒಟ್ಟು ಜನಸಂಖ್ಯೆಯ ಶೇಕಡಾ 85.37 ಮತ್ತು 14.62% ಇತ್ತು.  1981 ಮತ್ತು 1991ರ ನಡುವೆ ಪಟ್ಟಣದ ಜನಸಂಖ್ಯೆಯಲ್ಲಿ ಶೇಕಡಾ 2.76% ಏರಿಕೆ ಕಂಡುಬಂದಿದೆ. 1981-91ರ ದಶಮಾನದ ಜನಸಂಖ್ಯಾ ಬೆಳವಣಿಗೆಯು ಶೇಕಡಾ 15.65% ಆಗುತ್ತದೆ.  1951-61ರ ದಶಮಾನದ ಜನಸಂಖ್ಯಾ ಬೆಳವಣಿಗೆಯು ಅತ್ಯಧಿಕವಾಗಿದ್ದು, 25.57% ಏರಿಕೆಯಾಗಿತ್ತು ಮತ್ತೆ 1981-91ರಲ್ಲಿ 15.67% ಕ್ಕೆ ಕುಸಿಯಿತು.  1981-91ರಲ್ಲಿ ಬೆಳವಣಿಗೆಯು 7.43% ಇಳಿಮುಖವಾಗಿದೆ.  2001ರ ಜನಗಣತಿಯ ಪ್ರಕಾರ ಜಿಲ್ಲೆಯು ಗಂಡು-ಹೆಣ್ಣುಗಳ (1000 ಕ್ಕೆ 996) ಸಮತ್ವವನ್ನು ಹೊಂದಿದೆ.  ಜನಸಾಂದ್ರತೆಯು ತಾಲ್ಲೂಕುಗಳ ನಡುವೆ ಗಣನೀಯವಾಗಿ ವ್ಯತ್ಯಾಸವಿದೆ.  2001ರ ಜನಗಣತಿಯ ಪ್ರಕಾರ, ಹಾಸನ ತಾಲ್ಲೂಕು ಪ್ರತಿ ಚ.ಕಿ.ಮೀಗೆ 385ರಂತೆ ಪಟ್ಟಿಯ ಅಗ್ರಸ್ಥಾನದಲ್ಲಿದರೆ, ಅದರ ನಂತರ ಅರಕಲಗೂಡು (295), ಹೊಳೆನರಸೀಪುರ (290), ಚನ್ನರಾಯಪಟ್ಟಣ (266), ಅರಸೀಕೆರೆ (238), ಬೇಲೂರು (217), ಆಲೂರು (199) ಮತ್ತು ಪಟ್ಟಿಯ ಕೆಳಭಾಗದಲ್ಲಿ ಪ್ರತಿ ಚ.ಕಿ.ಮೀ.ಗೆ 129 ಜನಸಂಖ್ಯೆ ಇರುವ ಸಕಲೇಶಪುರ ತಾಲ್ಲೂಕು ಬರುತ್ತದೆ.  ಜಿಲ್ಲೆಯ ಒಟ್ಟು ಜನಸಾಂದ್ರತೆ ಪ್ರತಿ ಚ.ಕಿ.ಮೀ.ಗೆ 251.