ಮುಚ್ಚಿ

ಆಸಕ್ತಿಯ ಸ್ಥಳಗಳು

ಮಂಜರಾಬಾದ್ ಕೋಟೆ

ಮಂಜರಾಬಾದ್ ಕೋಟೆ

ಹಾಸನ ಜಿಲ್ಲೆಯು ಪ್ರಮುಖ ಪ್ರೇಕ್ಷಣೀಯ ಸ್ಥಳಗಳನ್ನೊಳಗೊಂಡ ಜಿಲ್ಲೆ. “ಕಲೆ-ಶಿಲ್ಪಕಲೆ, ಪ್ರಕೃತಿ ಸಿರಿಯ ರಮ್ಯ ತಾಣವಾಗಿರವ  ಹಾಸನ ಜಿಲ್ಲೆಯ ಪ್ರಮುಖ ತಾಲ್ಲೂಕು ಕೇಂದ್ರವಾದ ಸಕಲೇಶಪುರ ವರ್ಣರಂಜಿತ ವೈಶಿಷ್ಟಪೂರ್ಣ ವೈವಧ್ಯಮಯ ತಾಣಗಳನ್ನು ಹೊಂದಿದೆ. ಕಣ್ಣಿಗೆ ಹಬ್ಬ, ಮನಕ್ಕೆ ಮುದ ನೀಡುವ ಅರಣ್ಯಗಳು, ಬೆಟ್ಟಗುಡ್ಡಗಳ ಸಾಲು, ನದಿ, ಝರಿ, ತೊರೆಗಳಿಂದ ಕೂಡಿದ ಕಣಿವೆ ಪ್ರದೇಶಗಳು ಇಲ್ಲಿವೆ. ಈ ಪ್ರಾಂತ್ಯದಲ್ಲಿರುವ ಪಶ್ಚಿಮ ಘಟ್ಟದ ಪುಷ್ಪಗಿರಿ, ಬಿಸ್ಲೆಅರಣ್ಯ ಪ್ರದೇಶ, ಹಿರೇಕಲ್ಲುಗುಡ್ಡಗಳಲ್ಲಿರುವ ನಿತ್ಯಹರಿದ್ವರ್ಣದ ವನಸಿರಿಯ ನೋಟವನ್ನು ಮೆಚ್ಚಿ ಆನಂದಿಸಲು ಅವಕಾಶ ಇಲ್ಲಿದೆ.

ಸಕಲೇಶಪುರದಿಂದ ನೈರುತ್ಯ ದಿಕ್ಕಿನಲ್ಲಿ ಐದು ಕಿ.ಮೀ. ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ 48ರ ಎಡಬದಿಯಲ್ಲಿ ಸುಮಾರು 988 ಮೀಟರ್ ಎತ್ತರದ ಗುಡ್ಡದ ಮೇಲೆ ಮಂಜಿರಾಬಾದ್ ಕೋಟೆಯಿದೆ. 1792ರಲ್ಲಿ ಈ ಕೋಟೆಯನ್ನು ಟಿಪ್ಪುಸುಲ್ತಾನನು ಕಟ್ಟಿಸಿ, ಈ ಕೋಟೆಯ ಮೇಲಿಂದ ಸುತ್ತಲಿನ ಪ್ರಕೃತಿಯನ್ನು ಅವಲೋಕಿಸಿದಾಗ, ಇಲ್ಲಿನ ಸೌಂದರ್ಯಕ್ಕೆ ಬೆರಗಾಗಿ ಮಂಜಿರಾಬಾದ್ ಎಂದು ಹೆಸರಿಟ್ಟನು ಎಂದು ತಿಳಿದುಬರುತ್ತದೆ. ಕೋಟೆಯ ಮೇಲೆ ನಿಂತು ನೋಡಿದಾಗಲೇ ಪ್ರಕೃತಿಯ ಸೊಬಗನ್ನು ಸವಿಯಲು ಸಾಧ್ಯ. ಎತ್ತ ನೋಡಿದರತ್ತ ಹಸಿರು ಹೊದ್ದಿರುವ ಬೆಟ್ಟಗುಡ್ಡಗಳು, ಕಾಡುಕಣಿವೆಗಳು, ನದಿ ತೊರೆಗಳನ್ನು ಕಾಣುವುದೇ ಕಣ್ಣಿಗೆ ಹಬ್ಬ.

ಸುಮಾರು ೨೦೦ ಅಡಿ ಎತ್ತರದ ಅಡಾಣೆ ಗುಡ್ಡದ ಮೇಲೆ ಈ ಕೋಟೆಯನ್ನು ನಿರ್ಮಿಸಲಾಗಿದೆ. ಕೋಟೆಯ ಸುತ್ತಲೂ ಕಂದಕವಿದೆ ಮತ್ತು ಕೋಟೆಗೆ ಹೊಂದಿಕೊಂಡಂತೆ ಇರುವ ಹೊರ ಪ್ರಾಕಾರದಲ್ಲಿ ಮೂರು ಬಾಗಿಲುಗಳಿವೆ. ಪ್ರಮುಖ ದ್ವಾರವನ್ನು ಕುಂಡದ ಹೂಬಳ್ಳಿಯ ಚಿತ್ರದಿಂದ ಸಿಂಗರಿಸಲಾಗಿದೆ. ಅದೇ ಬಾಗಿಲಿನ ಒಳಛಾವಣಿಯಲ್ಲಿ ಎಂಟು ಮೂಲೆಯ ಕೋಟೆಯ ನಕ್ಷೆಯನ್ನು ಸೊಗಸಾಗಿ ಚಿತ್ರಿಸಿದ್ದಾರೆ. ಈ ಮಾದರಿಯ ತೋರಿಕೆಯಂತೆ ಕೋಟೆಯು ಅಪೂರ್ಣವೆಂದು ತಿಳಿದುಬರುತ್ತದೆ. ನಡು ಬಾಗಿಲನ್ನು ದಾಟಿ, ಒಳ ಬಾಗಿಲಿನಲ್ಲಿ ಪ್ರವೇಶ ಪಡೆದಾಗ ಕುದುರೆಲಾಯಗಳು ಕಾಣಿಸುತ್ತವೆ.  ಕೋಟೆಯ ಮಧ್ಯದಲ್ಲಿ ಕ್ರಾಸ್ ಆಕಾರದಲ್ಲಿರ ಆಳವಾದ ಕೊಳವೊಂದಿದೆ. ಇದಕ್ಕೆ ಮತ್ತು ನೀರಿನ ಕಂದಕಕ್ಕೂ ಸಂಬಂಧವಿದೆ. ಕೋಟೆಯಿಂದ ಹೊರಗೆ ಹೋಗಲು ಅವಕಾಶವಿರುವ ಎರಡು ರಹಸ್ಯ ಭೂಗತ ಮಾರ್ಗಗಳು ಇಲ್ಲಿವೆ. ಇವುಗಳಲ್ಲಿ ಒಂದು ಶ್ರೀರಂಗಪಟ್ಟಣಕ್ಕೂ ಇನ್ನೊಂದು ಮಂಗಳೂರಿಗೂ ಹೋಗುತ್ತವೆಂದು ಸ್ಥಳೀಯರ ಅಭಿಪ್ರಾಯ. ಆದರೆ, ಅಹಿತಕರ ಘಟನೆಗಳನ್ನು ತಪ್ಪಿಸುವ ಉದ್ದೇಶದಿಂದ ಈ ಸುರಂಗಕ್ಕೆ ಸುಮಾರು 50  ವರ್ಷಗಳ ಹಿಂದೆ ಭಾರತೀಯ ಪುರಾತತ್ವ ಇಲಾಖೆಯು ರಹಸ್ಯ ಮಾರ್ಗಕ್ಕೆ ಅಡ್ಡಲಾಗಿ ಗೋಡೆಯನ್ನು ಕಟ್ಟರುತ್ತಾರೆ.

ಕೋಟೆಯ ದಕ್ಷಿಣದ ಕೋಟೆಯ ಹೊರ ಪ್ರಾಕಾರಕ್ಕೆ ಬರಲು ಒಂದು ಗುಪ್ತ ಮಾರ್ಗವಿದೆ. ಇಲ್ಲಿ ನಿಂತು ಗದ್ದೆ ಬಯಲಿನತ್ತ ವೀಕ್ಷಿಸಿದರೆ ಒಂದು ಸ್ಥೂಪ ಗೋಚರಿಸುತ್ತದೆ. ಕುದುರೆ ಸವಾರಿ ನಡೆಸುತ್ತಿದ್ದ ಬ್ರಿಟಿಷ್ ಅಧಿಕಾರಿಯೊಬ್ಬರನ್ನು ಕೋಟೆಯಿಂದಲೇ ಗುಂಡಿಕ್ಕಿ ಕೊಲ್ಲಲಾಯಿತೆಂದು ಅದೇ ಸ್ಥಳದಲ್ಲಿ ಆತನ ಸಮಾದಿಯಾಯಿತೆಂದು ತಿಳಿಯುತ್ತದೆ.

ಕೋಟೆಯನ್ನು ಸಂಪೂರ್ಣ ಕಲ್ಲು, ಸುಟ್ಟ ಇಟ್ಟಿಗೆ ಮತ್ತು ಗಾರೆಯಿಂದ ನಿರ್ಮಿಸಿರುತ್ತಾರೆ. ಟಿಪ್ಪು ಸುಲ್ತಾನನ ಕಾಲದಲ್ಲಿ ಐಗೂರು, ಯಸಳೂರು, ಬಿಸಲೆ ಮತ್ತು ಇತರ ಪ್ರದೇಶಗಳನ್ನೊಳಗೊಂಡ ಮಲೆನಾಡ ಪ್ರಾಂತ್ಯವನ್ನು ಬಲಂನ ಕೃಷ್ಣಪ್ಪ ನಾಯಕನು ಆಳುತ್ತಿದ್ದನು.

ಕೋಟೆಯ ಮಧ್ಯಭಾಗದಲ್ಲಿರುವ ಪ್ಲಸ್ ಅಥವಾ ಕ್ರಾಸ್ ಆಕಾರದ ಕೊಳದ ದಕ್ಷಿಣ ದಿಕ್ಕಿನಲ್ಲಿ ಪಾವಟಿಗೆಗಳಿಂದ ರಚಿತವಾದ ಎರಡು ಶಸ್ತ್ರಶಾಲೆ ಮತ್ತು ಉಗ್ರಾಣವಿದೆ. ಕೋಟೆಯ ಉತ್ತರ ದಿಕ್ಕಿನಲ್ಲಿ ಗಾರೆಯ ಜಾಲಾಂದ್ರಗಳಿಂದ ನಿರ್ಮಾಣ ಮಾಡಿದ ಪಹರೆ ಕೊಠಡಿಗಳಿವೆ. ಒಂದು ಸ್ಥಳದಲ್ಲಿ ನೆಲಮಾಳಿಗೆಗೆ ದಾರಿಯಿದೆ. ಇದರ ಮುಂಭಾಗ ಇತರ ಎಲ್ಲವುಗಳಿಗೆ ಹೋಲಿಸಿದರೆ ಅದೊಂದು ವಿಶಿಷ್ಟ ಮತ್ತು ಸೂಚ್ಯವಾಗಿದ್ದು, ಬಹುಶಃ ಇದನ್ನು ಖಜಾನೆಯಾಗಿ ಬಳಸಲಾಗುತ್ತಿತ್ತು ಎನ್ನಬಹುದಾಗಿದೆ.

ಬಿಸಲೆ ಘಾಟ್

ಬಿಸ್ಲೆ ಘಾಟ್

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ಹೆತ್ತೂರು ಹೋಬಳಿಯಲ್ಲಿರುವ ಬಿಸಲೆ ಎಂಬಲ್ಲಿ ಸುಮಾರು 40 ಸಾವಿರ ಹೆಕ್ಟೇರ್‌ಗಳಷ್ಟು ವಿಸ್ತಾರವಾದ ಅರಣ್ಯ ಪ್ರದೇಶವಿದೆ. ಇದು ಏಷ್ಯಾ ಖಂಡದಲ್ಲೇ ಅತ್ಯಂತ ವಿಶಿಷ್ಟವಾದ ಅರಣ್ಯ ಪ್ರದೇಶವೆಂದು ಗುರುತಿಸಲ್ಪಟ್ಟಿದ್ದು ಹಾಸನ, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಿಸಲೆ ಅರಣ್ಯವು ಹಂಚಿಕೆಯಾಗಿದೆ. ಬಿಸಲೆ ಅರಣ್ಯ ಪ್ರದೇಶದಲ್ಲಿ ಪುಷ್ಪಗಿರಿ ಬೆಟ್ಟ, ಕುಮಾರ ಬೆಟ್ಟ, ಎಣ್ಣಿಕಲ್ಲು ಬೆಟ್ಟ, ಪತ್ಲ ಬೆಟ್ಟ, ದೊಡ್ಡ ಬೆಟ್ಟ ಹಾಗೂ ಕನ್ನಡಿಕಲ್ಲು ಬೆಟ್ಟಗಳಿವೆ. ಬಿಸಲೆ ಅರಣ್ಯ ಪ್ರದೇಶದಲ್ಲಿ ಹಲವಾರು ಜಾತಿಯ ಮರಗಳಿವೆ. ಹೊನ್ನೆ, ನಂದಿ, ಬೀಟೆ, ಸೊರಹೊನ್ನೆ, ಧೂಪದ ಮರಗಳು ಬಿಸಲೆ ಅರಣ್ಯ ಪ್ರದೇಶದಲ್ಲಿ ದೊರೆಯುವ ಪ್ರಮುಖವಾದ ವೃಕ್ಷ ಪ್ರಕಾರಗಳಾಗಿವೆ. ಆನೆ, ಕಾಡೆಮ್ಮೆ, ಕಡವೆ, ಕಾಡುಹಂದಿ ಮುಂತಾದ ಅನೇಕ ಕಾಡು ಪ್ರಾಣಿಗಳು ಬಿಸಲೆ ಅರಣ್ಯದಲ್ಲಿ ಕಾಣಸಿಗುತ್ತವೆ. ಬಿಸಲೆ ಅರಣ್ಯದ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಾಸಿಸುತ್ತಿರುವ ಜನರು ಇಲ್ಲಿನ ಅರಣ್ಯಸಂಪತ್ತನ್ನು ರಕ್ಷಿಸುತ್ತಿದ್ದಾರೆ. ಗ್ರಾಮಸ್ಥರು ಬೇಸಿಗೆ ಕಾಲದಲ್ಲಿ ಆಗಾಗ್ಗೆ ಕಾಡ್ಗಿಚ್ಚು ಸಂಭವಿಸುತ್ತದೆ. ಆಂತಹ ಸಂದರ್ಭಗಳಲ್ಲಿ ಸುತ್ತಲ ಗ್ರಾಮೀಣ ಪ್ರದೇಶದ ಜನರು ತಕ್ಷಣವೇ ಕಾರ್ಯನಿರತರಾಗಿ ಬೆಂಕಿಯನ್ನು ಆರಿಸುತ್ತಾರೆ. ಕಾಡುಗಳ್ಳರು ಅರಣ್ಯವನ್ನು ಪ್ರವೇಶಿಸದಂತೆ ಸದಾ ಎಚ್ಚರದಿಂದಿದ್ದು ಇಲ್ಲಿನ ಗ್ರಾಮಸ್ಥರು ಬಿಸಲೆ ಅರಣ್ಯವನ್ನು ಸಂರಕ್ಷಿಸುತ್ತಿದ್ದಾರೆ.